Pages

Tuesday, February 3, 2009

ನಿನ್ನಲಿಹೆನು

ಮರೆತು ಬಿಟ್ಟೆಯಾ ಎಂದು ನೀ ಕೇಳಿದರೆ
ನಾನು ಉತ್ತರಿಸಲಿ ಹೇಗೆ?
ಹೃದಯ ಬಡಿತವನು ಮರೆತು
ಬದುಕುವುದಾದರೂ ಹೀಗೆ?

ಗತಿಸಿದ ಕ್ಷಣಗಳನು
ಮೆಲುಕು ಹಾಕುವುದು ಸೊಗಸು
ಎಂದೆಂದೂ ನೆನಪಿರುವುದು ನಿನ್ನ
ಕಂಗಳಲಿ ಹೊಮ್ಮಿದ ಬಣ್ಣದ ಕನಸು !

ಅಲ್ಲಲ್ಲಿ ಹುಡುಕದಿರು ಎನ್ನ
ನಾನಲ್ಲೇ ಇರುವೆನು ನಿನ್ನೊಳಗಿನ ಕಲರವವಾಗಿ !
ಹೃದಯ ವೀಣೆಯ ಆಲಿಸು ಕಿವಿಗೊಟ್ಟು
ಹಕ್ಕಿ ಹಾರುವುದ ಮರೆಯುವುದೇ ಎಂದೆಂದೂ ?

ಮುರಳೀ ಗಾನ

ಹೃದಯದಲೊಂದು ಪುಟ್ಟ ಹಕ್ಕಿ
ಹಾಡುತಿಹುದು ಮುರಳೀ ಗಾನ

ರಾಗ ಭಾವ ತಾನೆ ಆಗಿ
ಪ್ರೀತಿ ರೆಕ್ಕೆ ಮೂಡಣದಿ ಹರಡಿ
ಬೊಗಸೆ ತುಂಬ ಆಸೆ ಹೊತ್ತು
ನೂರು ಕನಸ ಚೆಲ್ಲಿದೆ

ತನ್ನದೊಂದು ಮನೆಯ ಮಾಡಿ
ಬೆಳ್ಳಿ ಕಿರಣದಲ್ಲಿ ಮಿಂದು
ಹೃದಯ ಕಣಿವೆಯಲ್ಲಿ ಅಲೆದು
ಚೈತ್ರಕಾಗಿ ಕಾದಿದೆ

ಹೊತ್ತು ಕಳೆದು ಚಂದ್ರ ತಾಪ
ಬೀರುತಿರಲು ಮನದಿ ವಿರಹ
ಹಾಡು ದೂರದಲ್ಲಿ ಧ್ವನಿಸೆ
ರಾಧೆ ಬದುಕು ತನ್ನದೆನಲು
ಅಗೋ ಮುರಳಿ ಬಂದನು !

ಮನವ ಮೆಟ್ಟಿ ನಿಂತವರಾರು

ಕಳ್ಳ ಮನದೊಳಗದೇನು ಪಿಸು ಪಿಸು
ಪ್ರೀತಿ ನುಸುಳಿದೆ ನಾ ಕಾಣೆ
ಎಲ್ಲ ಹೂಗಳು ಅರಳಿ ನಿಂತವು ಅವಳೊಳ
ಗದೇನು ಮರುಳಿದೆ ನಾ ಕಾಣೆ !

ಹೃದಯ ಮಲ್ಲಿಗೆ ನಿತ್ಯ ಚುಂಬನ
ಒಲುಮೆ ಅತ್ತರು ಸಿಂಚನ
ಮನದ ಬಣ್ಣವ ತಿಳಿಯಲೊಲ್ಲದು
ನೀಲಾಗಾಸದ ಪ್ರತಿಫಲನ

ಸ್ವಾರ್ಥವಾವುದು? ಪ್ರೀತಿ ಪಾತ್ರವಾವುದು?
ಒಂದು ಕನಸಿಗೆ ಮತ್ತೊಂದು ಪರಿತ್ಯರ್ಥವು
ಚೆಲ್ಲು ಪ್ರೀತಿಗೆ ಹಿರಿ ಮನಸ ಕೊಲ್ಲು
ಬದುಕಿನರಿವಿನ ಪ್ರೀತ್ಯರ್ಥವು

ತಿಳಿಯದುದನು ತಿಳಿವ ಕಾಲವಲ್ಲವಿದು
ಹೃದಯಕೆ ಕಡಿವಾಣ ಹಿಡಿದವರಾರು?
ಸರಿ ತಪ್ಪುಗಳ ಕಾಗುಣಿತ ತಿದ್ದುವುದಕೆ
ಮನವ ಮೆಟ್ಟಿ ನಿಂತವರಾರು?

ಪ್ರೇಮದ ಜನನ

ಚೈತ್ರ ಚಿತ್ತಾರ ಎಂದಾಯಿತು ಶ್ವೇತ ಹರಿಣಿ
ನಸು ಮುಂಜಾನೆ ಎಂದಾಯಿತೋ ನಿಶಾ ಸ್ವಪ್ನ
ಎಲ್ಲವೂ ಅದಲು ಬದಲು ಆಯಿತೆಂದೋ
ಅಂದೇ ಜನಿಸಿತ್ತು ಪ್ರೇಮ !!

ಎರಡು ಹನಿ ಪ್ರೀತಿ

ಹೊಳೆವ ಎರಡು ಹನಿಗಳಲ್ಲಿ
ಪ್ರೀತಿ ತುಂಬಿ ಕಳುಹಿಸಿದೆ
ಬಿರಿವ ಮನದ ಮಲ್ಲಿಗೆಯಲಿ
ಇಡದೆ ಈಕೆ ಒಡೆದೆ?

ಮುಂಜಾವದ ಮಂಜಿನಲಿ
ಅಡಗಿರುವುದು ಬಿಸಿಯುಸಿರು
ಕೊರೆವ ಚಳಿಯ ಮಧ್ಯದಲಿ
ನಸು ಪ್ರೀತಿಯ ಚಿಗುರು

ಇರುವುದಿಲ್ಲಿ ಆದರೇನು
ಮನದ ಮಾತು ಉಳಿವುದೇ
ಆಗಸದಲಿ ಚುಕ್ಕಿಯಾಗಿ
ಪಿಸುಮಾತನು ನುಡಿಯದೆ

ಎರಡು ಹನಿಯ ಮತ್ತೆ ಕೊಡುವೆ
ಮುನಿಸದಿರು ನನ್ನೊಲವ
ಮರೆವುದೆಂತು ಸಾಧ್ಯ ಹೇಳು
ಒಂದೇ ಜೀವ ಭಾವ

ನೆನಪು

ಈಗ ಮೌನವೆ ಮಾತು
ಉಸಿರೇ ಹಾಡು
ಭಾವನೆಗಳೇ ಬದುಕು !
ಎಲ್ಲವೂ ಮಧುರವಾಗಿರುವುದು !
ನಿನ್ನ ನೆನಪೊಂದೇ
ಇರಿಯುತಿರುವುದು !!

ಸಂದೇಶ

ಸಂದೇಶ ಈಗಿಲ್ಲ
ತಪ್ಪು ನನ್ನದೇ ಎಲ್ಲ !
ನೋಡುವೆ ಪ್ರೀತಿ ಎಷ್ಟೆಂದು?
ಮೌನದ ಶಕ್ತಿ ಏನೆಂದು?

ಮಾತು ಬೇಡವೇ ನಿನಗೆ
ವಿರಹ ಬತ್ತದ ಬೇಗೆ
ಉರಿದು ಹೋಯ್ತು ಜಗವು
ಮುರಿದು ಹೋಯಿತೆ ಮನವು?

ಬೇಡವೀ ಮೌನ ಸಮರ
ಇದೋ ನನ್ನ ಪತ್ರದುತ್ತರ !
ಬಾ ಮನಕೆ ಹತ್ತಿರ
ಜಗದಗಲದೆತ್ತರ !

ಬಚ್ಚಿಟ್ಟ ಪ್ರೀತಿ

ಬಚ್ಚಿಟ್ಟ ಪ್ರೀತಿ ಪುಟಿದೆದ್ದು ಬಂದು
ಎದೆ ಬಿರಿದು ಮಲ್ಲಿಗೆಯಾದ ಬಗೆ ನೋಡಿ !

ಎಲ್ಲೆಲ್ಲೂ ತಡಕಾಡಿ ಮರಳಿ
ನಮ್ಮನೆಗೆ ಬಂದು
ಹುಸಿ ನಗೆಯ ಚೆಲ್ಲಿ
ಮುದದಿಂದ ಘಮ ಘಮಿಸಿದ ಹೂವ ಕಾಣೆ !

ವರುಷ ಕಾಯುವುದು ಹೀಗೆ?
ನಿಮಿಷ ಕಳೆಯುವುದು ಎಂತು?
ಎಂದೆಂಬ ಚಿಂತೆ ಕರಗಿಹುದು
ಋತುಮಾನ ಮಾಗಿಹುದು
ಚೈತ್ರ ಬಂದಿಹುದು
ಶುಭ್ರ ಮಣಿಯೊಳಗಿನ ಶ್ವೇತ ಕನ್ಯೆಯಾಗಿ !

ಸೋನೆ ಮಳೆ ಸುರಿಯಲಿ ಬಿಡು
ಹೃದಯದಪ್ಪುಗೆಯ ಸಡಿಲಿಸದೆ ಇದು
ಪ್ರೀತಿ ಹರಿಯಲಿ ಗಂಗೆ ತುಂಗೆಯಾಗಿ !
ಇನ್ನೊಂದು ಜನುಮ ಇರಲಿ ಬಿಡಲಿ
ಮುಂಜಾವದ ಮಂಜಿನಲೆ ಕರಗಿ ಸೋರಲಿ
ನನ್ನನೆಂದೂ ಬಚ್ಚಿಟ್ಟಿರು ನಿನ್ನ ಹೃದಯದೊಳಗೆ !

ವಿರಹದ ಸಿಕ್ಕುಗಳು

ಮೌನಕೆ ಎಷ್ಟೊಂದು ಅರ್ಥಗಳು
ಬಿಚ್ಚಿಟ್ಟಷ್ಟು ಹೊರಳುವ ಹೊಸ ಮರ್ಮಗಳು
ಅರಿವಿಲ್ಲದೆ ಹುಟ್ಟುವ ಪ್ರೀತಿಗೆ
ತಿಳಿಯಲಾಗದ ವಿರಹದ ಸಿಕ್ಕುಗಳು !