Pages

Wednesday, December 17, 2008

ತುತ್ತು

ನಿನ್ನೊಂದು
ಮುತ್ತೇ
ನನಗೀವುದು
ಸಾವಿರ ಹೊತ್ತಿನ
ಮತ್ತಿನ ತುತ್ತು !

ಸ್ಫೂರ್ತಿ

ಅರಳು ಹುರಿವ
ನಿನ್ನ
ಮಾತಿನಲ್ಲಿ
ನಾ
ಅರಳಿಬಿಟ್ಟೆ !

ಮರು ಜನ್ಮ

ನೀನು ನನ್ನನ್ನು ಜನ್ಮ ಜನ್ಮಾಂತರಗಳ ಬಂಧನಕ್ಕೆ
ಒಳಪಡಿಸಲು ಇಚ್ಚಿಸುವೆಯಾದರೆ
ಸ್ವಲ್ಪ ನಿಲ್ಲು.. ಹಳೆ ಕಡತಗಳ ಶೂಧಿಸಬೇಕು
ಅದರ ಆಧಾರದಲ್ಲಿ ಮುಂದಿನ ಜನ್ಮಗಳ ಲೆಕ್ಕ ಈಗಲೀ ಬರೆದಿಡುವೆ

ಚಂದಿರ

ನನ್ನ ಮನೆಯೊಳು
ಯಾವತ್ತು ಹೊಳೆವುದು
ಹುಣ್ಣಿಮೆ ಚಂದಿರ
ನನ್ನವಳ ಮೊಗ
ಬಲು ಸುಂದರ !

ಅನಂತ ಪ್ರೇಮದೆಡೆಗೆ

ನನ್ನ
ಮನಸ ಬಾಗಿಲ ತೆರೆದು ಬಿಟ್ಟೆ
ಹೃದಯದ ಪರದೆ ಸರಿಸಿ ಬಿಟ್ಟೆ
ಈಗ
ಕನಸ ಪಕ್ಷಿ ಸ್ವಚ್ಚಂದದಲಿ
ಹಾರಾಡುತ್ತಿದೆ ಅನಿಕೇತನವಾಗಿ !

ಸ್ಪಂದನ

ಎಲ್ಲವೂ ಆನಂದಮಯವಾಗಿರುವಾಗಲೇ
ನೀನು ನನ್ನ ಬದುಕಲ್ಲಿ ಪ್ರವೇಶಿಸಿದೆ
ಅತ್ಯಂತ ಕೋಮಲ ಮೃದು ಸ್ಪಂದನದಲ್ಲೂ
ನೋವಿನ ಸೆಳೆತವಿದೆಯೆಂದು ನೀನು ತೋರಿಸಿಕೊಟ್ಟೆ !

ಸಾವು ಬದುಕು

ಸಾವಿನಾಚೆ ಬದುಕಿದೆಯೋ ಇಲ್ಲವೋ ನಾನರಿಯೆ
ನಾ ಬದುಕಿರುವಾಗಲೀ ನೀನ್ಯಾಕೆ ಅದನು ತೋರಿಸಿಕೊಡುವೆ !

ಸಾನ್ಯಮಿ

ನಾ ಬಹು ಸಂಯಮಿ ಎಂಬುದು
ನನ್ನ ನಂಬಿಕೆ
ನೀ ಮುಗುಳ್ನಕ್ಕರೆ ನನ್ನ ನಂಬಿಕೆಗಳೆಲ್ಲ
ಅಲ್ಲಾಡಿಬಿಡುತ್ತವೆ !!

ಬಚ್ಚಿಟ್ಟ ಮುತ್ತು

ಹೃದಯವನು ಅಗೆದು ಬಗೆದು
ಕೊನೆಗೆ ದೊರಕಿದುದು ಒಂದು
ಥಳ ಥಳಿಸುವ ಸಿಹಿಯಾದ ಮುತ್ತು
ನಾ ಕೇಳದೆ
ನೀ ಹೇಳದೆ
ಕೊಟ್ಟದ್ದು !
ಬಚ್ಚಿಟ್ಟದ್ದು !!

ಮರುಜನ್ಮ

ಕ್ರೂರತನಕ್ಕೂ ಒಂದು ಮಿತಿಯಿದೆ
ನಿನಗಿನ್ನೂ ನನ್ನ ತಿವಿದು ತಿವಿದು
ತೃಪ್ತಿಯಾಗಲಿಲ್ಲವೇ?
ಚಿಂತಿಸದಿರು,
ನಿನಗಾಗಿಯೀ ನಾನು ಇನ್ನೊಮ್ಮೆ ಜನ್ಮವೆತ್ತಿ
ಬರುತ್ತೇನೆ !

Monday, December 8, 2008

ತಪ್ಪಲ್ಲವೀ??

ನೀನು ಕ್ಷಣ ಕಾಲ ತೊರೆದೆಯೆಂದು
ನಾನು ಅಳುವುದು ಸರಿಯಲ್ಲ
ಅದು ನಂಗೂ ಗೊತ್ತು
ಹಾಗೆಂದೇ ಆದರೂ
ಕ್ಷಣ ಕಾಲವಾದರೂ ನನ್ನ ತೊರೆಯುವುದು
ತಪ್ಪೆಂದು ನಿನಗನಿಸುವುದಿಲ್ಲವೇ??

ಸಿಡಿಲು

ಮಳೆಯೊಂದಿಗೆ ಆಗಸದಲಿ
ಮೇಘಗಳು ಗುಡು ಗುಡುವೆನ್ನುವಾಗ
ನಿನ್ನ ನೆನಪಾಗಿ ಬೆವರುವುದೇಕೆಂದು
ನಾನರಿಯೆ !!

ರಾಜಿ ಸಂಧಾನ

ವಾಸ್ತವ ಪರಿಸ್ಥಿತಿಗಳೊಡನೆ ರಾಜಿ ಮಾಡಿಕೊಳ್ಳಬೇಕು
ಎನ್ನುವುದು ಬುದ್ದಿವಂತರ ಅಂಬೋಣ
ಆದ್ದರಿಂದಲೇ.......
ನನ್ನ ಬಿಗಿಯಪ್ಪುಗೆಯಿಂದ ತಪ್ಪಿಸಿಕೊಳ್ಳುವ
ಪ್ರಯತ್ನ ಮಾಡಬೇಡ !

ನನ್ನಧರ ನಿನಗೆ ಕಹಿಯೇ

ಪ್ರತಿ ವಾರ ಐಸ ಕ್ರೀಮ್ ಪಾರ್ಲರಿನಲ್ಲೇ
ಐಸ್ ಕ್ರೀಮ್ ತಿನ್ನಬೇಕೆಂದೇಕೆ ನಿನಗೆ ಹಠ?
ನನ್ನಧರ ನಿನಗೆ ಕಹಿಯೇ?

ಮರೆತು ಹೋದ ನೋವು

ಬದುಕು ಅರಳೀತೆಂಬ ಆಶಾವಾದ ನನಗಿತ್ತು
ನಿರಾಷೆಯಾಗಲಿಲ್ಲ, ಅಂತೆಯೇ ಆಯಿತು !
ಇಷ್ಟೊಂದು ಘಮ್ಮಾಗಿ ಅರಳೀತೆಂದು
ಮಾತ್ರ ನಾ ಭಾವಿಸಿರಲಿಲ್ಲ !
ಮುದುಡುವ ನೋವಿನ ಸುಖ
ಹೇಗೆಂದು ಮರೆತು ಹೋಗಿದೆ !!

Wednesday, December 3, 2008

ತಂಬಿಸಿಲು

ಬಿಸಿಲಿನಲ್ಲಿ ಬೇಯುವುದು ಕಷ್ಟವೇ ಸರಿ
ನಿನ್ನ ಹೃದಯ ತಾಪದೆದುರು
ಬಿಸಿಲಿನ ಝಳವೂ ತಂಪೆನೆಸಿದರೆ
ಅದು ಬಿಸಿಲ ತಪ್ಪಲ್ಲ !

ಋತು

ಕಾಲವಾವುದಾದರೇನು?
ನವ ದಂಪತಿಗಳಿಗೆ?
ಸರ್ವ ಋತುಮಾನವೂ ಸರ್ವ ಶ್ರೇಷ್ಠ
ನೀ ಋತುಮತಿಯಾದಾಗ ಮಾತ್ರ ನನಗೆ ಬಲು ಕಷ್ಟ !

ಪಲ್ಲವಿ

ಅವಳು ಪಲ್ಲವಿಯಾದರೆ
ನಾನು ಅನುಪಲ್ಲವಿಯಾಗುವೆ !

ಪಲ್ಲವಿ

ಅವಳು ಪಲ್ಲವಿಯಾದರೆ
ನಾನು ಅನುಪಲ್ಲವಿಯಾಗುವೆ !

ಮುಗ್ಧತೆ

ಮಗುವಿನಂತೆ ಮುಗ್ಧ ಮನಸು ನನ್ನದು
ಎನ್ನುವುದಕೆ ನನ್ನ ಆಕ್ಶೇಪವಿದೆ
ಕೆಲವೊಮ್ಮೆ ಬಲು ಕ್ರೂರಿಯಾಗುತ್ತೇನೆ ಇದಕೆ
ನಿನ್ನ ರಕ್ತ ಚೆಲ್ಲಿದ ತುಟಿಯೇ ಸಾಕ್ಷಿ !

ಕಮಲನೇತ್ರ

ನಿನ್ನ ಕಂಗಳನು ನನ್ನ ಹೃದಯದೊಳಗೆ ಇರಿಸುವೆ
ತುಸುವಾದರೂ ಚಂದ್ರ ಕಾಂತಿ ಪಸರಿಸಲಿ !
ಇಲ್ಲವಾದರೆ ದುಂಬಿಗಳ ಝ್ಹೆಂಕಾರವನು
ನೀನು ಹೇಗೆ ಸಹಿಸುವೆ?

ಪ್ರಳಯ

ಪ್ರಳಯ ಬರುವುದಾದರೆ ಬರಲಿ ಮತ್ತೊಮ್ಮೆ
ನಾನದನು ಖಂಡಿತ ಸ್ವಾಗತಿಸುವೆ
ನೀನಂತೂ ಬಲು ಕಠಿಣವಾಗಿಯೇ ಇರುವೆ
ಹೃದಯದಗ್ನಿಯನು ಬಚ್ಚಿಡಲಿ ಎಲ್ಲಿ?

ಮಾರ್ದವತೆ

ಪ್ರಿಯೆ, ವಿರಹ ತಾಪದಿ ಅತ್ತು ಅತ್ತು
ಕಣ್ಣುಗಳ ಬೆಂಕಿಯಾಗಿಸಬೇಡ
ಆಗಸದ ನಕ್ಷತ್ರಗಳು ನಿನ್ನ ನಯನಗಳ
ಮಾರ್ದವತೆಯನು ಸುಃಖಿಸಲಿ ಬಿಡು !

ನಿನ್ನ ನಾ ಚೆನ್ನಾಗಿ ಬಲ್ಲೆ

ನಿನ್ನ ಕೆಲವು ನಗೆಗಳ ಅರ್ಥ ನನಗೊತ್ತು
ಮೌನದ ಭಾಷೆಯ ಆಳ ನಾ ಅರಿಯದೇ ಹೋದರೂ
ನಿನ್ನ ಅಧರಗಳ ನಾ ಚೆನ್ನಾಗಿ ಬಲ್ಲೆ !

ಅಸ್ವಸ್ಥತೆ

ನಿನ್ನ ಕಣ್ಣ ನೋಟದಿಂದ ಉಕ್ಕೇರಿ ಹರಿದಿದ್ದ ಲಾವಾರಸ
ನನ್ನ ಕಣ್ಣ ಮೂಲಕ ಸಾಗಿ ಹೃದಯವನ್ನು ತಂಪಾಗಿರಿಸಿದ್ದು
ಅಂದಿಗೆ ದಿಟವೇ ಆಗಿತ್ತು !
ಆದರೆ ಇದೂ ನಿಜವೇ
ಇಂದು ನಾನು ಅಸ್ವಸ್ಥನಾಗಿದ್ದೆನೆ !

ಅಹಿತ

ತಂತಿಯಿಂದ ಚಿಮ್ಮಿದ ನಾದ ಎಷ್ಟೇ ಮಧುರವಾಗಿರಲಿ
ಅದು ನಿನ್ನ ಹೃದಯವನ್ನು ಗೀರಿ
ನೋಯಿಸುವುದಾದರೆ
ನನಗದು ಅಹಿತವೇ!!!